ನಿರ್ದೇಶನ -
	ಸಾಧಾರಣವಾಗಿ ಒಂದೊಂದು ಪದಕ್ಕೂ ಇರುವ ಎರಡು ವಿಧವಾದ ಕ್ರಿಯೆಗಳಲ್ಲಿ ಒಂದು (ಡಿನೊಟೇಷನ್). ಯಾವುದಾದರೂ ಒಂದು ವಸ್ತು ಅಥವಾ ವ್ಯಕ್ತಿಯ ಕಡೆಗೆ ನಮ್ಮ ಗಮನವನ್ನು ಸೆಳೆಯುವುದು ಈ ಕ್ರಿಯೆಯ ಕೆಲಸ. ಆ ರೀತಿ ನಿರ್ದೇಶಿಸಲ್ಪಟ್ಟ ವಸ್ತು ಅಥವಾ ವ್ಯಕ್ತಿಯಲ್ಲಿನ ವಿಶಿಷ್ಟತೆ, ಗುಣ ಅಥವಾ ಲಕ್ಷಣಗಳ ಕಡೆಗೂ ನಮ್ಮ ಗಮನವನ್ನು ಸೆಳೆಯುವುದು ಎರಡನೆಯದಾದ ಅರ್ಥ ಸೂಚನ ಕ್ರಿಯೆಯ ಕೆಲಸ. ಸಾಮಾನ್ಯವಾಗಿ ಈ ಎರಡೂ ಕ್ರಿಯೆಗಳು ಒಂದಕ್ಕೊಂದು ಹಾಸು-ಹೊಕ್ಕಾಗಿ, ಎರಡೂ ಒಟ್ಟಿಗೆ ನಡೆಯುತ್ತಿರುತ್ತವೆ. 

	ಆದರೆ, ಈ ಸಾಮಾನ್ಯ ನಿಯಮಕ್ಕೆ ಕೆಲವು ಅಪವಾದಗಳುಂಟು. ಅಂಕಿತನಾಮಗಳು ಕೇವಲ ನಿರ್ದೇಶನ ಕ್ರಿಯೆಯನ್ನು ಪಡೆದಿರುತ್ತವೆ. ಅವು ಅರ್ಥ ಸೂಚಕವಲ್ಲ. ತಂದೆ ತಾಯಿಗಳು ತಮ್ಮ ಮಕ್ಕಳಿಗೆ ಇಟ್ಟಿರುವ ಹೆಸರುಗಳು ಅಂಕಿತನಾಮಗಳು. ಇವುಗಳ ಉದ್ದೇಶ ಪ್ರಪಂಚದಲ್ಲಿ ವ್ಯವಹಾರಕ್ಕಾಗಿ ಆ ವ್ಯಕ್ತಿಯನ್ನು ಸೂಚಿಸುವುದಷ್ಟೇ ಹೊರತು ಯಾವ ಗುಣ ವಿಶೇಷಗಳನ್ನಾಗಲೀ, ಅರ್ಥವನ್ನಾಗಲೀ ಸೂಚಿಸುವುದಿಲ್ಲ. ಉದಾಹರಣೆಗೆ ವಾಮನರಾಯನೆಂಬ ಹೆಸರಿರುವ ಮನುಷ್ಯ ಕುಬ್ಜನೇ ಆಗಿರಬೇಕಾಗಿಲ್ಲ; ಸುಂದರಮ್ಮನೆಂದು ಹೆಸರಿರುವ ಸ್ತ್ರಿ ಸುಂದರಿಯೇ ಆಗಿರಬೇಕಾಗಿಲ್ಲ. ಏಕೆಂದರೆ ಈ ಹೆಸರುಗಳ ಉದ್ದೇಶ ಅರ್ಥವನ್ನು ಸೂಚಿಸುವುದಲ್ಲ. ಅಂಕಿತನಾಮಗಳಂತೆಯೇ ಅನೇಕ ವೇಳೆ ಸರ್ವನಾಮಗಳೂ ಅರ್ಥ ಸೂಚನೆಯ ಉದ್ದೇಶವನ್ನು ಪಡೆದಿರುವುದಿಲ್ಲ. ಉದಾಹರಣೆಗೆ ಇದು, ಅದು, ನಾನು, ನೀನು ಎಂಬ ಪದಗಳು ಕೇವಲ ವಸ್ತು ಅಥವಾ ವ್ಯಕ್ತಿಯನ್ನು ಸೂಚಿಸುವುದಕ್ಕೆ ಬಳಸಲ್ಪಡುತ್ತವೆಯೇ ಹೊರತು, ಅರ್ಥವನ್ನು ಸೂಚಿಸುವುದಕ್ಕಲ್ಲ.

	ಪಾಶ್ಚಾತ್ಯ ತಾರ್ಕಿಕರಲ್ಲಿ ಪ್ರಸಿದ್ಧನಾದ ಜೆ. ಎಸ್. ಮಿಲ್ಲನ ಪ್ರಕಾರ ಒಂದು ಪದದ ನಿರ್ದೇಶನ ಸಾಮಥ್ರ್ಯ ಹೆಚ್ಚಿದ್ದರೆ, ಅದಕ್ಕನುಗುಣವಾಗಿ ಅದರ ಅರ್ಥ ಸೂಚನ ಸಾಮಥ್ರ್ಯ ಕಡಿಮೆ ಇರುತ್ತದೆ; ಅಂತೆಯೇ ಅದರ ಅರ್ಥ ಸೂಚನ ಸಾಮಥ್ರ್ಯ ಹೆಚ್ಚಾಗಿದ್ದರೆ, ನಿರ್ದೇಶನ ಸಾಮಥ್ರ್ಯ ಕಡಿಮೆ ಇರುತ್ತದೆ. ಉದಾಹರಣೆಗೆ ಪ್ರಾಣಿ ಎಂಬ ಪದದ ನಿರ್ದೇಶನ ಸಾಮಥ್ರ್ಯ ವಿಸ್ತಾರವಾದುದು. ಏಕೆಂದರೆ, ಜೀವವುಳ್ಳ ವಸ್ತುಗಳೆಲ್ಲವೂ ಪ್ರಾಣಿಗಳೇ. ಆದರೆ, ಬುದ್ದಿಯುಳ್ಳ ಪ್ರಾಣಿ ಎಂದು ಹೇಳಿದರೆ ಅದರ ನಿರ್ದೇಶನ ಸಾಮಥ್ರ್ಯ ಬಹಳವಾಗಿ ಸೀಮಿತವಾಗಿ ಮನುಷ್ಯನಿಗೆ ಮಾತ್ರ ಅದು ಅನ್ವಯವಾಗುತ್ತದೆ. ಅದೇ ಸಮಯದಲ್ಲಿಯೇ ಅದರ ಅರ್ಥಬಾಹುಳ್ಯ ವಿಸ್ತಾರಗೊಳ್ಳುತ್ತದೆ. ಏಕೆಂದರೆ ಅದು ಮನುಷ್ಯನಲ್ಲಿ ಪ್ರಾಣಿಗೆ ಸಂಬಂಧಪಟ್ಟಂತಿರುವ ಗುಣಗಳನ್ನು ಸೂಚಿಸುವುದಷ್ಟೇ ಅಲ್ಲದೆ, ಅವನಲ್ಲಿನ ಬುದ್ಧಿಯನ್ನೂ ಅದಕ್ಕೆ ಸಂಬಂಧಪಟ್ಟ ವಿಶಿಷ್ಟಗುಣಗಳನ್ನೂ ಸೂಚಿಸುತ್ತದೆ. ಈ ರೀತಿ ಪದದ ನಿರ್ದೇಶನ ಸಾಮಥ್ರ್ಯ ಮತ್ತು ಅದರ ಅರ್ಥಸೂಚಕ ಸಾಮಥ್ರ್ಯಗಳು ವ್ಯತಿರಿಕ್ತ ಪ್ರಮಾಣ ನಿಯಮಕ್ಕೆ ಅನುಗುಣವಾಗಿ ಪರಿವರ್ತನೆಯಾಗುವುದೆಂದು ಮಿಲ್ ಸಾರಿದ್ದಾನೆ.

	ಆದರೆ ಮಿಲ್ಲನ ವಾದವನ್ನು ಒಪ್ಪುವುದು ಕಷ್ಟವೆಂದು ಅನೇಕ ತಾರ್ಕಿಕರು ತೋರಿಸಿಕೊಟ್ಟಿದ್ದಾರೆ. ಏಕೆಂದರೆ ಅನೇಕ ವೇಳೆ ಒಂದು ಪದದ ನಿರ್ದೇಶನ ಸಾಮಥ್ರ್ಯ ಬೆಳೆದಂತೆ, ಅದರ ಅರ್ಥಸೂಚಕ ಸಾಮಥ್ರ್ಯವೂ ಬೆಳೆಯುವುದುಂಟು. ಉದಾಹರಣೆಗೆ ಮನುಷ್ಯ ಎಂಬ ಪದವನ್ನು ತೆಗೆದುಕೊಂಡರೆ ಅದರ ನಿರ್ದೇಶನ ಕ್ರಿಯೆ ಜನಸಂಖ್ಯೆಯನ್ನು ಸೂಚಿಸುವುದೆಂದು ಹೇಳಬಹುದು; ಸುಮಾರು ಹತ್ತನೆಯ ಶತಮಾನದಲ್ಲಿ ಜನಸಂಖ್ಯೆ ಕಡಿಮೆ ಇದ್ದುದರಿಂದ, ಆ ಪದದ ನಿರ್ದೇಶನ ಸಾಮಥ್ರ್ಯವೂ ಕಡಿಮೆ ಇತ್ತು. ಇಪ್ಪತ್ತನೆಯ ಶತಮಾನದಲ್ಲಿ ಜನಸಂಖ್ಯೆ ಹೆಚ್ಚಿದುದರಿಂದ ಆ ಪದದ ನಿರ್ದೇಶನ ಸಾಮಥ್ರ್ಯವೂ ಬೆಳೆಯಿತು. ಆದರೆ, ಆ ಪದದ ಅರ್ಥಸೂಚನ ಸಾಮಥ್ರ್ಯ ತಗ್ಗಲಿಲ್ಲ; ಬದಲಾಗಿ ಅದೂ ಬೆಳೆದಿದೆ. ಮನುಷ್ಯ ಈ ಒಂದು ಸಾವಿರ ವರ್ಷಗಳಲ್ಲಿ ಸಾಧಿಸಿರುವ ಸಾಧನೆಗಳನ್ನು ಗಮನಿಸಿದರೆ ಈ ವಿಷಯ ನಮಗೆ ವೇದ್ಯವಾಗುತ್ತದೆ. ಅಲ್ಲದೆ, ಮಿಲ್ಲನ ವಾದವನ್ನು ಒಪ್ಪುವುದರಲ್ಲಿ ಒಂದು ಮುಖ್ಯವಾದ ಕಷ್ಟವಿದೆ: ಒಂದು ಪದದ ಅರ್ಥವನ್ನು ಪ್ರಮಾಣ ರೂಪದಲ್ಲಿ ಬೆಳೆಯುವುದಾದರೂ ಹೇಗೆ? ಅದು ವ್ಯಕ್ತಿಯ ಮನಸ್ಸನ್ನು ಅವಲಂಬಿಸಿರುತ್ತದೆ. ಪದದ ಅರ್ಥ ಅದನ್ನು ಅರ್ಥಮಾಡಿಕೊಳ್ಳುವ ವ್ಯಕ್ತಿಯ ಮನಸ್ಸಿನ ಸಾಮಥ್ರ್ಯಕ್ಕೆ ಅನುಗುಣವಾಗಿ ಬದಲಾಗಬಹುದು. ಈ ಕಾರಣಗಳಿಂದಾಗಿ ಮಿಲ್ಲನ ವಾದವನ್ನು ಸಮಂಜಸವೆಂದು ಹೇಳಲಾಗುವುದಿಲ್ಲ.

	ಏನೇ ಆದರೂ ಒಂದು ಪದದ ನಿರ್ದೇಶನ ಕ್ರಿಯೆ ಮತ್ತು ಅದರ ಅರ್ಥಸೂಚನ ಕ್ರಿಯೆ ಇವುಗಳಿಗಿರುವ ವ್ಯತ್ಯಾಸದ ಪರಿಗಣನೆ ತಾರ್ಕಿಕ ವಿಚಾರದ ಬೆಳೆವಣಿಗೆಯಲ್ಲಿ ಒಂದು ಮುಖ್ಯವಾದ ಅಂಶವೆಂದು ಹೇಳಬಹುದು.
(ಜಿ.ಎಸ್.ಆರ್‍ಐ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ